ಮಾರಿಕಣಿವೆ -
ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿ ಚಿತ್ರದುರ್ಗ ಬೆಟ್ಟಗಳ ಪೂರ್ವದಲ್ಲಿರುವ ಒಂದು ಕಣಿವೆ.  ವೇದಾವತಿ ನದಿ ಈ ಕಣಿವೆಯ ಮೂಲಕ ಹರಿಯುತ್ತದೆ.  ಇಲ್ಲಿ ವೇದಾವತಿ ನದಿಗೆ ಅಡ್ಡಗಟ್ಟೆಯನ್ನು ಕಟ್ಟಿ ವಾಣಿವಿಲಾಸ ಸಾಗರವೆಂಬ ಜಲಾಶಯ ನಿರ್ಮಿಸಲಾಗಿದೆ. ಈ ಜಲಾಶಯದ ಉದ್ದ  405 ಮೀ. ಎತ್ತರ 49.4 ಮೀ, ಜಲಾನಯನ ಪ್ರದೇಶ 80 ಚ.ಕೀಮಿ ಜಲಾಶಯದ ನೀರು ಶೇಖರಣಾ ಸಾಧ್ಯತೆ  ಸುಮಾರು 880 ಮಿಲಿಯನ್  ಘನ ಲೀಟರ್. ಈ ಜಲಾಶಯ 10.100 ಕ್ಕೂ  ಹೆಚ್ಚು  ಹೆಕ್ಟೇರ್  ಭೂಮಿಗೆ ನೀರುಣಿಸುತ್ತದೆ. 1898 ರಲ್ಲಿ  ಇದರ ನಿರ್ಮಾಣ ಕಾರ್ಯ ಆರಂಭವಾಗಿ 1907 ರಲ್ಲಿ  ಪೂರ್ಣಗೊಂಡಿತು.

ಈ ಜಲಾಶಯಕ್ಕೆ ಸೇರಿದಂತೆಯೇ ಮಾರಿದೇವತೆಯ ಗುಡಿ ಇದೆ. ಹಿಂದೆ ಈ ಸ್ಥಳದಲ್ಲಿ ಹಳ್ಳಿಯ ಜನ  ಈ ಮಾರಿಯನ್ನು  ಕಣಿವೆ ಮಾರಮ್ಮ ಎಂಬುದಾಗಿ  ಕರೆಯುತ್ತಿದ್ದರು.  ಅದೇ ಹೆಸರನ್ನು ಕಣಿವೆಗೂ ಕೊಡಲಾಗಿದೆ. ಮಾರಿಯ ದೇವಾಲಯ ಮೊದಲು ಮರದಿಂದ ನಿರ್ಮಿತವಾಗಿದ್ದು ಅನಂತರ ಕಲ್ಲಿನಿಂದ ಕಟ್ಟಲಾಗಿದೆ. ದೇವಾಲಯದಲ್ಲಿ ಮೂರು ಶಿಲ್ಪಗಳಿವೆ. ಪಾರ್ವತಿಯ ವಿಗ್ರಹ ಮಧ್ಯದಲ್ಲಿದ್ದು ಬಲಗಡೆ ಲಕ್ಷ್ಮಿ ಎಡಗಡೆ ಮಾರಿ ವಿಗ್ರಹಗಳಿವೆ. ದೇವಾಲಯದ ಮುಂಭಾಗದಲ್ಲಿ ಕಬ್ಬಿಣದಿಂದ ಮಾಡಿದ 2.4 ಮೀ ಎತ್ತರದ ದೀಪವಿದೆ. ವರ್ಷಕ್ಕೊಮ್ಮೆ ಇದನ್ನು ಹಚ್ಚಲಾಗುವುದು.					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ